ನವದೆಹಲಿ, ಏ.5: ಭಾರತ ವಿಶ್ವ ಕಪ್ ಗೆಲ್ಲಲಿ ಎಂದು ತಂಡದ ಸಾರಥಿ ಧೋನಿಯ ಪತ್ನಿ, ಗಾನ ಕೋಗಿಲೆ ಲತಾ ಮಂಗೇಷ್ಕರ್ ಮುಂತಾದವರು ಉಪವಾಸ ವ್ರತ ಆಚರಿಸಿದ್ದ ಸುದ್ದಿ ಮರೆಮಾಚುವ ಮುನ್ನ ಭಾರತಕ್ಕೆ ಲೋಕ್ ಪಾಲ್ ಮಸೂದೆ ಲಭಿಸಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗಲಿ ಎಂದು 120 ಕೋಟಿ ಭಾರತೀಯರ ಪರವಾಗಿ ಹಿರಿಯಜ್ಜ ಅಣ್ಣಾ ಹಜಾರೆ ಅವರು ಮಂಗಳವಾರ ಉಪವಾಸ ಆರಂಭಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ಲೋಕ್ ಪಾಲ್ (ಒಂಬುಡ್ಸ್ ಮನ್ ) ಮಸೂದೆ ತಿದ್ದುಪಡಿಗೆ ಆಗ್ರಹಿಸಿ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಜಂತರ್ ಮಂತರ್ ನಲ್ಲಿ ಆಜೀವ ಉಪವಾಸ ಹೋರಾಟ ಕೈಗೊಂಡಿದ್ದಾರೆ. ಅದಕ್ಕೂ ಮುನ್ನ, ಪ್ರಸ್ತಾವಿತ ನಿರಶನನ್ನು ಕೈಬಿಡುವಂತೆ ಅಣ್ಣಾ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಸೋಮವಾರ ರಾತ್ರಿ ವಿನಂತಿಸಿದ್ದರು. ಕಳೆದೊಂದು ತಿಂಗಳಿಂದ ಲೋಕಪಾಲ್ ಬೇಡಿಕೆಯತ್ತ ಪ್ರಧಾನಿ ಗಮನ ಸೆಳೆಯಲು ಅವರು ನಡೆಸಿದ ಅನೇಕ ಪ್ರಯತ್ನಗಳು ವಿಫಲಗೊಂಡಿದ್ದವು ಎಂಬುದು ಗಮನಾರ್ಹ.
ಮ್ಯಾಗ್ಸಸ್ಸೆ ಪ್ರಶಸ್ತಿ ವಿಜೇತ, 73 ವರ್ಷದ ಅಣ್ಣಾ ತಮ್ಮ ಬೆಂಬಲಿಗರೊಂದಿಗೆ ಬೆಳಗ್ಗೆ ರಾಜ್ ಘಾಟ್ ಗೆ ಭೇಟಿ, ರಾಷ್ಟ್ರಪಿತ ಮಾಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು. ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ, ಮಾಹಿತಿ ಹಕ್ಕು ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಸೇರಿದಂತೆ ನೂರಾರು ಮಂದಿ ಅಣ್ಣಾ ಅವರ ಜತೆಗೂಡಿದ್ದಾರೆ.
ಹಜಾರೆ ಸೇರಿದಂತೆ ನಿರಶನದಾರರು ಲೋಕ್ ಪಾಲ್ ಮಸೂದೆಗೆ ಪರ್ಯಾಯವಾಗಿ ಜನ್ ಲೋಕ್ ಪಾಲ್ ಮಸೂದೆ ಅಳವಡಿಕೆಗೆ ಒತ್ತಾಯಿಸುತ್ತಿದ್ದಾರೆ. ಜನ್ ಲೋಕ್ ಪಾಲ್ ಮಸೂದೆಯನುಸಾರ ಸಾರ್ವಜನಿಕ ಜೀವನದಲ್ಲಿ ತುಂಬಿತುಳುಕುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ರಾಜ್ಯಗಳಲ್ಲಿ ಲೋಕ್ ಪಾಲ್ ಮತ್ತು ಲೋಕಾಯುಕ್ತ ವತಿಯಿಂದ ಸ್ವತಂತ್ರ ಒಂಬುಡ್ಸ್ ಮನ್ ರಚನೆಗೆ ಅವಕಾಶ ಕಲ್ಪಿಸಲಿದೆ. ಪ್ರಧಾನ ಮಂತ್ರಿ ಸೇರಿದಂತೆ ಕೇಂದ್ರ ಸಚಿವರ ವಿರುದ್ಧವೂ ಭ್ರಷ್ಟಾಚಾರ ವಿರೋಧಿ ತನಿಖೆ ಕೈಗೊಳ್ಳಬಹುದಾಗಿದೆ.
ರಾಜ್ಯಗಳಲ್ಲಿ ಲೋಕ್ ಪಾಲ್ ಅಥವಾ ಲೋಕಾಯುಕ್ತ ಸ್ವತಂತ್ರ ಸಂಸ್ಥೆಗಳು ಕೈಗೊಳ್ಳುವ ತನಿಖೆಗಳು ಒಂದು ವರ್ಷದಲ್ಲಿ ಪೂರ್ಣಗೊಳ್ಳಬೇಕು. ತಪ್ಪಿತಸ್ಥರಿಗೆ ಕನಿಷ್ಠ ಐದು ವರ್ಷ ಮತ್ತು ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವಂತಿರಬೇಕು ಎಂಬುದು ಅಣ್ಣಾ ಅವರ ಬೇಡಿಕೆಯಾಗಿದೆ. ಆದರೆ ಸರಕಾರ 6 ತಿಂಗಳಿಂದ 7 ವರ್ಷದ ಶಿಕ್ಷೆಗೆ ಮಾತ್ರ ಒಲವು ತೋರಿದೆ.
ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಆಜೀವ ಉಪವಾಸ ಹೋರಾಟ ಫಲ ನೀಡುವುದೇ ಎಂಬ ಪ್ರಶ್ನೆಗೆ ದೇಶದ ಶೇ. 95ರಷ್ಟು ಜನ 'ಫಲ ನೀಡಲೇಬೇಕು' ಎಂದು ಘರ್ಜಿಸಿದ್ದಾರೆ. ಇದರಿಂದ ಕಂಗೆಟ್ಟಿರುವ ಕೇಂದ್ರ ಸರಕಾರ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಇದೀಗ ಉನ್ನತಮಟ್ಟದ ತುರ್ತು ಸಭೆ ನಡೆಸುತ್ತಿದೆ. ಹಜಾರೆ ಅವರ ಆಮರಣ ಉಪವಾಸ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸಾಂಕ್ರಾಮಿಕವಾಗಿ ದೇಶಾದ್ಯಂತ ಹಜಾರೋ ಅಣ್ಣಾಗಳು ಅಭೂತ ಪೂರ್ವ ನಿರಶನದಲ್ಲಿ ತೊಡಗಿದ್ದಾರೆ.
ಈ ಮಧ್ಯೆ, ಜನ ಲೋಕಪಾಲ್ ಮಸೂದೆ ಅಳವಡಿಕೆಗೆ ಸಹಮತ ವ್ಯಕ್ತಪಡಿಸಲು ಸರಕಾರ ಹಿಂಜರಿಯುತ್ತಿರುವುದರಿಂದ ಉಪವಾಸ ಹೋರಾಟದ ನಡುವೆಯೇ ಏಪ್ರಿಲ್ 12ರಿಂದ 'ಜೈಲ್ ಭರೋ ಆಂದೋಲನ' ಕ್ಕೆ ಕರೆ ನೀಡಿದ್ದಾರೆ. ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ಇಂದು ಬೆಳಗ್ಗೆ ಅಣ್ಣಾ ನಿರಶನ ಕೈಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿ, ಸರಕಾರದ ನಿಲುವನ್ನು ತಿಳಿಸಿದರು.
ಭ್ರಷ್ಟಾಚಾರ ವಿರೋಧಿ ಸಮಿತಿಗೆ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ ಮತ್ತು ಅಣ್ಣಾ ಅವರ ಸೂಚನೆಯಂತೆ ನ್ಯಾಯಮೂರ್ತಿಗಳಾದ ಜೆ. ಎಸ್. ವರ್ಮಾ ಮತ್ತು ಸಂತೋಷ್ ಹೆಗ್ಡೆ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವುದು ಅಸಾಧ್ಯ ಎಂದು ಸಚಿವ ಸಿಬಲ್ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಂತೆ 72 ವರ್ಷದ ಅಣ್ಣಾ ಜೈಲ್ ಭರೋ ಚಳವಳಿಗೆ ಕರೆ ನೀಡಿದರು.
ಇದರಿಂದ ಮತ್ತಷ್ಟು ಗೊಂದಲಕ್ಕೆ ಸಿಕ್ಕಿದ ಸರಕಾರ ಪ್ರಧಾನಿ ನಿವಾಸದಲ್ಲಿ ಉನ್ನತ ಸಭೆ ನಡೆಸುತ್ತಿದೆ. ಅಣ್ಣಾ ಒತ್ತಾಸೆಗೆ ಪರೋಕ್ಷ ಬೆಂಬಲ ಸೂಚಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಮತ್ತು ಸರಕಾರದ ಪರ ಅಣ್ಣಾ ಅವರ ಜತೆ ಸಂಧಾನ ನಡೆಸುತ್ತಿರುವ ಸಚಿವ ಕಪಿಲ್ ಸಿಬಲ್ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ, ಹಜಾರೆ ಅವರ ಪ್ರತಿನಿಧಿಗಳಾದ ಸ್ವಾಮಿ ಅಗ್ನಿವೇಶ್, ಅರವಿಂದ್ ಕೇಜ್ರಿವಾಲ್ ಮತ್ತು ಸಚಿವ ಕಪಿಲ್ ಸಿಬಲ್ ಮಧ್ಯೆ ಇಂದು ಸಂಜೆ 6 ಗಂಟೆಗೆ ಮಾತುಕತೆ ನಿಗದಿಯಾಗಿದೆ.