
ಕಿಸನ್ ಬಾಬುರಾವ್ ಹಜಾರೆ ಎಂಬ ಹೆಸರಿನ ಆ ಹಿರಿಯರು ಭ್ರಷ್ಟಾಚಾರದ ವಿರುದ್ಧದ ಒಂದು ದೊಡ್ಡ ಹೋರಾಟಕ್ಕೆ ಮುನ್ನುಡಿ ಹಾಡಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರೆಲೆಗನ್ ಸಿದ್ಧಿ ಎಂಬ ಹಳ್ಳಿಯನ್ನು ಮಾದರಿ ಹಳ್ಳಿಯಾಗಿ ರೂಪಿಸಿ, ತನ್ನಿಡೀ ಬದುಕನ್ನೇ ಸಮಾಜಕ್ಕಾಗಿ ಮೀಸಲಿಟ್ಟ ಈ ಹಿರಿಯರು ದೆಹಲಿಯ ಜಂತರ್ ಮಂತರ್ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.
ಭ್ರಷ್ಟಾಚಾರವೆಂಬ ಮಹಾ ಪಿಡುಗು: ಭಾರತದಲ್ಲಿದಿನಗಳೆದಂತೆ ಭ್ರಷ್ಟಾಚಾರವೆನ್ನುವುದು ಆಳವಾಗಿ ಬೇರೂರತ್ತಲೇ ಹೋಗುತ್ತಿದೆ. ಈ ರೋಗವು ರಾಜಕಾರಣದ ಮೊಗಸಾಲೆಯನ್ನೂ ಬಿಟ್ಟಿಲ್ಲದಿರುವಾಗ, ನಾಡಿನ ವ್ಯವಸ್ಥೆಗಳನ್ನು ಕಟ್ಟಿ ನಿರ್ವಹಿಸಬೇಕಾದ ಜನಪ್ರತಿನಿಧಿ ಸಭೆಗಳು ಕೂಡಾ ಭ್ರಷ್ಟಾಚಾರವನ್ನು ಇಲ್ಲವಾಗಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ನೋವು ಜನರಲ್ಲಿದೆ. ಇಡೀ ವ್ಯವಸ್ಥೆಯೇ ಭ್ರಷ್ಟಾಚಾರದ ಕ್ಯಾನ್ಸರ್ ತಗುಲಿ ನಲುಗುತ್ತಿರುವಾಗ ಇದಕ್ಕೊಂದು ಮದ್ದು ಬೇಕು ಎಂದು ಜನಾಂದೋಲನ ರೂಪಿಸುವಲ್ಲಿ ಈ ಹಿರಿಯ ಜೀವ ತೊಡಗಿದೆ.
ಜನ್ ಲೋಕಪಾಲ್ ಮಸೂದೆಯನ್ನು ಸರಿಯಾಗಿ ರೂಪಿಸಿ ಜಾರಿಗೊಳಿಸಲು ಪ್ರಧಾನಮಂತ್ರಿಗಳಿಗೆ ಮೊರೆಯಿಡುತ್ತಿದ್ದರೂ ಅದು ಫಲಿಸಲಿಲ್ಲವೆಂದು ಇದೀಗ ಅಣ್ಣಾ ಹಜಾರೆಯವರು ಸಾಯೋವರೆಗೆ ಉಪವಾಸ ಮಾಡುವುದಾಗಿ ಘೋಷಿಸಿ, ಅದರಂತೆ ಇಂದು ಸತ್ಯಾಗ್ರಹ ಆರಂಭಿಸಿದ್ದಾರೆ.
ಲೋಕಪಾಲ ಮಸೂದೆ ಮತ್ತು ಜನ್ ಲೋಕಪಾಲ್ ಮಸೂದೆ
2010ರಲ್ಲಿ ಭಾರತ ಸರ್ಕಾರ ಭ್ರಷ್ಟಾಚಾರ ನಿಯಂತ್ರಣದ ಉದ್ದೇಶದಿಂದ ಲೋಕ್‍ಪಾಲ್ ಮಸೂದೆಯನ್ನು ಜಾರಿಗೊಳಿಸಲು ಮುಂದಾಯಿತು. ಈ ಮಸೂದೆಯಲ್ಲಿದ್ದ ಹಲವಾರು ಕುಂದುಕೊರತೆಗಳು ಭ್ರಷ್ಟಾಚಾರವನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿಲ್ಲವೆಂದು ಅಣ್ಣಾ ಒಂದು ಚಳವಳಿಯನ್ನು ಶುರುಮಾಡಿದರು. ಇದರ ಅಂಗವಾಗಿ "ಭ್ರಷ್ಟಾಚಾರದ ವಿರುದ್ಧ ಭಾರತ" ಎನ್ನುವ ಸಂಘಟನೆ ಸದಸ್ಯರ ಜೊತೆಗೂಡಿ "ಜನ್ ಲೋಕ್‍ಪಾಲ್" ಮಸೂದೆಯನ್ನು ಸಿದ್ಧಪಡಿಸಲಾಯಿತು. ಈ ಮಸೂದೆಯನ್ನು ನ್ಯಾಯಮೂರ್ತಿ ಡಾ. ಸಂತೋಶ್ ಹೆಗ್ಡೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರುಗಳು ಸಿದ್ಧಪಡಿಸಿದ್ದಾರೆ. ಇದರಲ್ಲಿ ಭ್ರಷ್ಟರಿಗೆ ಜೀವಾವಧಿಯಂತಹ ಕಠಿಣ ಶಿಕ್ಷೆಯೂ, ಜನರ ನೇರ ಪಾಲ್ಗೊಳ್ಳುವಿಕೆಯೂ, ಲೋಕಾಯುಕ್ತರ ವ್ಯಾಪ್ತಿಯ ಹೆಚ್ಚಳವೂ ಅಡಗಿದ್ದು ಭ್ರಷ್ಟಾಚಾರ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
ಈ ಮಸೂದೆಯಂತೆ ಲೋಕಪಾಲ್ ಮಸೂದೆ ರೂಪುಗೊಳ್ಳಬೇಕು ಎಂದು ಒತ್ತಾಯಿಸಿ ಅಣ್ಣಾ ಹಜಾರೆ ಈಗ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಅವರನ್ನು ಬೆಂಬಲಿಸಿ ದೇಶಾದ್ಯಂತ ಜನಸಾಮಾನ್ಯರು ದನಿ ಎತ್ತಿದ್ದಾರೆ. ಈ ದನಿ ಮತ್ತಷ್ಟು ಗಟ್ಟಿಯಾಗಿ ಸಂಸತ್ತಿನಲ್ಲಿ ಕುಳಿತವರ ಕಿವಿಗಳನ್ನು, ಕಣ್ಣುಗಳನ್ನು ತೆರೆಸಬೇಕಾಗಿದೆ. ಭ್ರಷ್ಟಾಚಾರದ ವಿರುದ್ಧದ ಈ ಹೋರಾಟದಲ್ಲಿ ನಮ್ಮದೂ ಒಂದು ದನಿ ಇರಲಿ. ಅಣ್ಣಾ ಅವರನ್ನು ಬೆಂಬಲಿಸಿ, ಕೂಡಲೇ ಜನ ಲೋಕಪಾಲ್ ಮಸೂದೆಯನ್ನು ಜಾರಿ ಮಾಡಲು ಮುಂದಾಗುವಂತೆ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸೋಣ.
ನೀವು ಕೈ ಜೋಡಿಸಿ: ಅನುಕೂಲವಿದ್ದವರು ಬೆಂಗಳೂರಿನಲ್ಲೂ ಏಪ್ರಿಲ್ 5ರಿಂದ 10ರವರೆಗೆ ಸ್ವಾತಂತ್ರ್ಯ ಉದ್ಯಾನವನ (Freedom park)ಅಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬಹುದು. ಭ್ರಷ್ಟಾಚಾರ ವಿರುದ್ಧ ಏ.5ರಿಂದ ನಡೆದಿರುವ ಈ ಹೋರಾಟಕ್ಕೆ ಲೋಕ್ ಸತ್ತಾ, ಫಾರ್ವರ್ಡ್ 150, ಬನವಾಸಿ ಬಳಗ, ಪ್ರಜಾ, ಎಸ್ ಎನ್ ಎನ್ ಎ, ಅವಿರತ, ಎಡಿಆರ್, ಸ್ವರಾತ್ಮ, ನಮ್ಮ ಬೆಂಗಳೂರು ಪ್ರತಿಷ್ಠಾನ, ದಕ್ಷ್, ಥರ್ಮಲ್ ಅಂಡ್ ಎ ಕ್ವಾರ್ಟರ್, ಎಂಪವರ್ಡ್ ಬೆಂಗಳೂರು, ಸ್ಮಾರ್ಟ್ ವೋಟ್.ಇನ್, ಐ ಪೇಯ್ಡ್ ಬ್ರೈಬ್, ಐ ವೊಂಟ್ ಗೀವ್/ಟೆಕ್ ಬ್ರೈಬ್, ಯುಎನ್ ಒಡಿಸಿ, ಭ್ರಷ್ಟಾಚಾರ ನಿರ್ಮೂಲನ ಸಮಿತಿ, ಸ್ವಾಮಿ ವಿವೇಕಾನಂದ ಯುವ ಸಂಘ ಮೈಸೂರು, ಡಬ್ಲ್ಯೂ ಎ ವೈಇ, ಯುವ ಬೆಂಗಳೂರು, ಸಾಕು.ಇನ್ ಸೇರಿದಂತೆ ನಗರದ ಅನೇಕ ಸಂಘ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ನಾಲ್ಕು ದಿನಗಳಿಂದ ಇಡೀ ದೇಶಾದ್ಯಂತ ಸುನಾಮಿಯಂತೆ ಅಪ್ಪಳಿಸಿದ ಭ್ರಷ್ಟಾಚಾರ ವಿರೋಧಿ ಅಲೆಗೆ ಸಿಕ್ಕಿ ಹೈರಾಣಗೊಂಡ ಯುಪಿಎ ಸರಕಾರವು ಅಣ್ಣಾ ಹಜಾರೆ ಅವರ ಅಷ್ಟೂ ಬೇಡಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಈ ಸಂಬಂಧ ಸರಕಾರಿ ಆದೇಶದ ಪ್ರತಿ ನಮ್ಮ ಕೈಗೆ ಸೇರುವವರೆಗೂ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುವ ಮಾತೇ ಇಲ್ಲ. ನಾನು ಆರೋಗ್ಯವಾಗಿದ್ದು, ಶನಿವಾರ ಸರಕಾರದ ಆದೇಶಕ್ಕೆ ಕಾಯುವೆ. ಅವಸರವೇನಿಲ್ಲ ಎಂದು 72 ವರ್ಷದ ಅಣ್ಣಾ ಜಂತರ್ ಮಂತರ್ ಬಳಿ ಶುಕ್ರವಾರ ರಾತ್ರಿ 9 ಗಂಟೆಗೆ ಘೋಷಿಸಿದ್ದಾರೆ.
ಸುಮಾರು 83 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ಅಣ್ಣಾ ಅವರ ಆರೋಗ್ಯ ಸ್ಥಿರವಾಗಿದೆ. ಅಣ್ಣಾ ಹಜಾರೆ ಸಾರಥ್ಯದಲ್ಲಿ ಭಾರತದಾದ್ಯಂತ ನಡೆದ ಅಭೂತಪೂರ್ವ ಹೋರಾಟಕ್ಕೆ ಸದ್ಯಕ್ಕೆ ಮೊದಲ ಹಂತದ ಜಯ ದೊರೆತಿದೆ. ಆದರೆ ಜನ ಲೋಕಪಾಲ ಮಸೂದೆಯು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡನೆಯಾಗಿ ಕಾನೂನು ಸ್ವರೂಪ ಪಡೆದ ಬಳಿಕವಷ್ಟೇ ದೇಶದ ಜನತೆ ಸಂತಸ ಪಡಬಹುದಾಗಿದೆ.
ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಅಂತೂ ಇಂತೂ ಸ್ಪಂದಿಸಿರುವ ಕೇಂದ್ರ ಸರಕಾರ, ಬಿಗಿಯಾದ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೆ ತರುವ ಸಲುವಾಗಿ 10 ಸದಸ್ಯರ ಸಮಿತಿಯನ್ನು ರಚಿಸಲು ತೀರ್ಮಾನಿಸಿದೆ. ಐದು ಮಂದಿ ಕೇಂದ್ರ ಸಚಿವರು ಮತ್ತು ಅಣ್ಣಾ ಹಜಾರೆ ಅವರು ಸಹಮತದೊಂದಿಗೆ ನಾಗರಿಕ ಸಮಾಜ ವತಿಯಿಂದ ಐದು ಮಂದಿ ಸಮಿತಿಯಲ್ಲಿ ಸ್ಥಾನ ಪಡೆಯಲಿದ್ದಾರೆ. ಸಮಿತಿಯ ಸದಸ್ಯರಾಗಿರುವಂತೆ ಹಜಾರೆ ಅವರಿಗೂ ಸರಕಾರ ಆಹ್ವಾನ ನೀಡಿದೆ.
ಸರಕಾರದ ಪ್ರಸ್ತಾವನೆಗೆ ಹಜಾರೆ ಬೆಂಬಲಿಗರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸರಕಾರ ಅಧಿಸೂಚನೆಯನ್ನೇ ಹೊರಡಿಸಬೇಕು ಎಂಬ ಪಟ್ಟನ್ನು ಬೆಂಬಲಿಗರು ಸಡಿಲಿಸಿದ್ದು ಸರಕಾರಿ ಆದೇಶವನ್ನು ಹೊರಡಿಸಿದರೆ ಸಾಕು ಎಂದು ಸೂಚಿಸಿದ್ದಾರೆ. ಆದರೆ ಸಮಿತಿಗೆ ಸಹ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ವಿಧಿಸಿದ್ದ ಹೊಸ ಷರತ್ತಿಗೂ ಸರಕಾರ ಅನುಮೋದನೆ ನೀಡಿದೆ. ಶಾಂತಿ ಭೂಷಣ್ ಅವರು ಸಮಿತಿಯ ಸಹ ಅಧ್ಯಕ್ಷರಾಗಿರುತ್ತಾರೆ. ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇದೇ ವೇಳೆ, ಸಮಿತಿಯಲ್ಲಿ ಸದಸ್ಯನಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದರೆ ಖಂಡಿತಾ ಅಹ್ವಾನವನ್ನು ಒಪ್ಪಿಕೊಳ್ಳುವೆ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.
ಕರಡು ಮಸೂದೆಯ ಸಂಚಾಲಕರಾಗಿ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ನೇಮಕಗೊಂಡಿದ್ದಾರೆ. ಹಜಾರೆ ಅವರ ಬಹುತೇಕ ಬೇಡಿಕೆಗಳಿಗೆ ಸರಕಾರ ಅಸ್ತು ಎಂದಿದೆ. ಇದೇ ವೇಳೆ ಶುಕ್ರವಾರ ಮಧ್ಯಾಹ್ನ ಪತ್ರಕರ್ತರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ಸರಕಾರವನ್ನು ಬ್ಲ್ಯಾಕ್ ಮೇಲೆ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.
ಹಜಾರೆ ಅವರ ಉಪವಾಸ ಸತ್ಯಾಗ್ರಹ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಭ್ರಷ್ಟಾಚಾರದ ವಿರುದ್ಧ ಅವರು ಊದಿರುವ ಕಹಳೆಗೆ ಇಡೀ ದೇಶ ಮಾರ್ದನಿಸುತ್ತಿದೆ. ಯಡಿಯೂರಪ್ಪ, ಅಮಿತಾಬ್ ಬಚ್ಚನ್, ಬಾಬಾ ರಾಮ್ ದೇವ್ ಸೇರಿದಂತೆ ಗಣ್ಯರು ಮತ್ತು ನಗಣ್ಯರು ಎಂಬ ಬೇಧವಿಲ್ಲದೆ ಲಂಚ ಲೋಕಕ್ಕೆ ಧಿಕ್ಕಾರ ಕೂಗುತ್ತಿರುವ ವರದಿಗಳು ದೇಶದ ನಾನಾ ಮೂಲೆಗಳಿಂದ ಮೊಳಗುತ್ತಿದೆ.
ಕರ್ನಾಟಕದ ಪ್ರಜೆಗಳೂ ಕೂಡ ಈ ಪೂತನಿ ಸಂಹಾರದಲ್ಲಿ ಪಾಲ್ಗೊಳ್ಳುವುದಕ್ಕೆ ಹಿಂದೆ ಬಿದ್ದಿಲ್ಲ. ಬೆಂಗಳೂರೂ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಶುಕ್ರವಾರ ಲಂಚ ವಿರೋಧಿ ಮೆರವಣಿಗೆಗಳು, ಸಭೆಗಳು ನಡೆದವು. ಪಾರ್ಥೇನಿಯಂ ರೀತಿ ಸರ್ವಾಂತರ್ಯಾಮಿಯಾಗಿರುವ ಲಂಚ ನಿರ್ಮೂಲನ ಮಾಡುವ ಈ ರಾಷ್ಟ್ರೀಯ ಯಜ್ಞದಲ್ಲಿ ನಮ್ಮ, ನಿಮ್ಮಂಥವರಿಗೆ ಜಯ ಯಾವತ್ತೂ ಸಿಗುತ್ತದೆ ಎಂದು ಕಾಯೋಣ.